ಪಿ.ಬಿ.ಪ್ರೇಮನಾಥ್ ನಿರ್ಮಾಣದ ಈ ಚಿತ್ರಕ್ಕೆ ರೋಹಿತ್ ಕೀರ್ತಿ ನಿರ್ದೇಶನ
EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಮನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ "ಬಿಗ್ ಬಾಸ್" ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ "#ಪಾರು ಪಾರ್ವತಿ" ಚಿತ್ರದ ಶೀರ್ಷಿಕೆ ಅನಾವರಣ ಹಾಗೂ EIGHTEEN THIRTY SIX ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಉದ್ಘಾಟನೆ ಇತ್ತೀಚೆಗೆ ನೆರವೇರಿತು. ಆನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಮೊದಲು ಮಾತನಾಡಿದ ನಿರ್ಮಾಪಕ ಪ್ರೇಮನಾಥ್ ಅವರು, ನಾನು ಮೂಲತಃ ಐಟಿ ಉದ್ಯೋಗಿ. ಚಿಕ್ಕವಯಸ್ಸಿನಿಂದಲೂ ಸಿನಿಮಾ ನೋಡುತ್ತಿದ್ದ ನನಗೆ, ಸಿನಿಮಾ ನಿರ್ಮಾಣ ಮಾಡುವ ಕನಸ್ಸಿತ್ತು. ಅದು ಈಗ ನೆರವೇರಿದೆ. ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ನಾನು ಕೆಲಸದ ಮೇಲೆ ಅನೇಕ ಊರುಗಳಲ್ಲಿ ವಾಸವಾಗಿದ್ದೆ. ಇದು ಕೂಡ ಒಂದು ಪ್ರವಾಸದ ಕಥೆಯಾಗಿರುವುದರಿಂದ ಇಷ್ಟವಾಯಿತು. ಇನ್ನು ನಮ್ಮ EIGHTEEN THIRTY SIX ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಉದ್ಘಾಟನೆಯಾಗಿದೆ. EIGHTEEN THIRTY SIX ಕೂಡಿದಾಗ 9 ಬರುತ್ತದೆ. ಅದು ನನ್ನ ಲಕ್ಕಿ ನಂಬರ್ ಎಂದರು.